ಇಟಗಿಯ ಮಹಾದೇವ ದೇವಾಲಯವನ್ನು ಕ್ರಿ.ಶ. 1112 ರಲ್ಲಿ ಕಲ್ಯಾಣ ಚಾಲುಕ್ಯರ ದೊರೆ 6ನೇ ವಿಕ್ರಮಾದಿತ್ಯನ ಮಹಾಮಂತ್ರಿಯಾಗಿದ್ದ ಇಟಗಿಯ ಮಹಾದೇವ ದಂಡನಾಯಕ ಮಹತ್ತರ ಯುದ್ಧ ಜಯಿಸಿದ ಪ್ರತೀಕವಾಗಿ ನಿರ್ಮಿಸಿದ್ದಾನೆ.ದೇಶದಲ್ಲೇ ಅತ್ಯದ್ಭುತ ಎನ್ನಲಾಗುವ ವಾಸ್ತುಶಿಲ್ಪ ಹೊಂದಿರುವುದರಿಂದ ‘ದೇವಾಲಯಗಳ ಚಕ್ರವರ್ತಿ’ ಎಂದೂ ಈ ದೇವಸ್ಥಾನವನ್ನು ಕರೆಯುವುದುಂಟು. 900 ವರ್ಷದ ಇತಿಹಾಸವಿರುವ ಈ ದೇವಾಲಯದಲ್ಲಿ ಬಾದಾಮಿ ಚಾಲುಕ್ಯರ ಒರಟು ಮತ್ತು ಹೊಯ್ಸಳರ ಸೂಕ್ಷ್ಮ ಕೆತ್ತನೆಗಳು ಮೇಳೈಸಿವೆ ಎಂದೇ ಹೇಳಲಾಗುತ್ತದೆ. ಗರ್ಭಗುಡಿ, ಸುಕನಾಸಿ,  ನವರಂಗ ಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯ ಪರಿಪೂರ್ಣ ದೇವಾಲಯ ಎಂದೇ ಬಿಂಬಿತವಾಗಿದೆ. ಈ ದೇವಾಲಯದ ಕುರಿತು ಗುಣಗಾನ ಮಾಡಿರುವ ಕಸೀನ್ಸ್ ಅವರು ‘ಕರ್ನಾಟದಲ್ಲಿಯೇ ಇದೊಂದು ವಿಶಿಷ್ಟ ದೇವಾಲಯ’ ಎಂದಿದ್ದಾರೆ.

ಪ್ರಮುಖವಾಗಿರುವುದೇನು?

ನಕ್ಷತ್ರಾಕಾರದ ಜಗುಲಿ, ವಿಭಿನ್ನವಾದ ಕೆತ್ತನೆಯನ್ನು ಒಳಗೊಂಡಿರುವ ಕಂಬಗಳು ಮುಖಮಂಟಪ ಹೊತ್ತುನಿಂತಿವೆ. ರಂಗಮಂಟಪದಲ್ಲಿನ ಕಂಬಗಳು ಬೇಲೂರಿನ ಚನ್ನಕೇಶವ ಗುಡಿಯ ಮಾದರಿಯಲ್ಲಿವೆ. ಗೋಲಾಕಾರವಾಗಿ ತಗ್ಗಾಗಿರುವ ಈ ಭುವನೇಶ್ವರಿಯಲ್ಲಿ ಭೈರವ ಇದ್ದಾನೆ. ಇಡೀ ದೇವಾಲಯದಲ್ಲಿ ಕುಸುರಿ ಕೆಲಸವೇ ತುಂಬಿಕೊಂಡಿದೆ. ಮಂಟಪದ ನಂತರವೇ ಸುಕನಾಸಿ. ಇಲ್ಲಿ ಶಿವನ ನಾಟ್ಯ ಭಂಗಿ ಇದೆ. ಕೀರ್ತಿ ಶಿಖರವಾಗಿದ್ದು, ಬಳ್ಳಿ ಹಬ್ಬಿಕೊಂಡಿದೆ.ಹಂಪಿಗೆ ಬಹಳ ಸಮೀಪದಲ್ಲೇ ಇದ್ದರೂ ಇಟಗಿಯಲ್ಲಿ ಪ್ರವಾಸೋದ್ಯಮ ಅಷ್ಟಾಗಿ ಬೆಳೆದಿಲ್ಲ. ಪ್ರವಾಸೋದ್ಯಮ ಇಲಾಖೆಯೂ ಈ ಕುರಿತು ಗಮನ ಹರಿಸಬೇಕು ಎನ್ನುವುದು ಸ್ಥಳೀಯರ ಒತ್ತಾಯ.

ಪೂರ್ಣಗೊಳಿಸಿದವರಿಗೆ ಮರಣ?

ಇಂಥ ಮಹಾನ್ ದೇವಾಲಯವನ್ನು ಪೂರ್ಣಗೊಳಿಸಿದವನಿಗೆ ಮರಣ ಎಂದು ಜ್ಯೋತಿಷಿಗಳು ಹೇಳಿದ್ದರಂತೆ. ಅದಕ್ಕಾಗಿಯೇ ಇದನ್ನು ಬಹಳಷ್ಟು ವರ್ಷ ಕಾಲ ಯಾರು ಪೂರ್ಣಗೊಳಿಸಿರಿಲಿಲ್ಲವಂತೆ. ತೀರಾ ಇತ್ತೀಚಿಗೆ ನಿಜಾಮರ ಆಡಳಿತದಲ್ಲಿ ಗೋಪುರವನ್ನು ಪೂರ್ಣಗೊಳಿಸಲಾಗಿದೆ ಎನ್ನುವುದು ಇತಿಹಾಸ. ಭವಿಷ್ಯ ನಿಜವಾದ ಬಗ್ಗೆ ದಾಖಲೆ ಇಲ್ಲ.ಇನ್ನು ದೇವಸ್ಥಾನದ ಹಿಂದಿನ ಭಾಗದಲ್ಲಿ ಪುಷ್ಕರಣಿ ಇದೆ. ಇದು ಕೂಡಾ ವಿಭಿನ್ನ ಹಾಗೂ ಅಚ್ಚುಕಟ್ಟಾಗಿದೆ. ಪುಷ್ಕರಿಣಿ ಬಹಳ ಆಳವಾಗಿದೆ. ಕೆಳ ಹಂತದವರೆಗೂ ಮೆಟ್ಟಿಲುಗಳಿವೆ. ಈಗಲೂ ಇದರಲ್ಲಿ ನೀರು ಇರುತ್ತದೆ. ಅದೇ ನೀರನ್ನು ದೇವಸ್ಥಾನದ ಸುತ್ತಲು ಇರುವ ಉದ್ಯಾನಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತದೆ.

ಹೀಗೆ ಬನ್ನಿ

ಕುಕನೂರಿನಿಂದ 11 ಕಿ ಮೀ,

ಹಂಪಿಯಿಂದ 65 ಕಿ.ಮೀ,

ಗದಗದಿಂದ 35 ಕಿ.ಮೀ,

ಕೊಪ್ಪಳದಿಂದ 15 ಕಿ.ಮೀ,

ಯಲಬುರ್ಗಾದಿಂದ 22 ಕಿ.ಮೀ ದೂರದಲ್ಲಿದೆ ಇಟಗಿ.

ಗದಗ, ಹಂಪಿ, ಕೊಪ್ಪಳ, ಯಲಬುರ್ಗಾ ಕುಕುನೂರಿನಿಂದ. ಜುಲೈನಿಂದ ಮಾರ್ಚ್‌ವರೆಗಿನ ಅವಧಿ ಇಲ್ಲಿಗೆ ಭೇಟಿ ಕೊಡಲು ಸೂಕ್ತ. ಗದಗ, ಕೊಪ್ಪಳ, ಹೊಸಪೇಟೆಗಳಿಗೆ ರೈಲು ಸಂಪರ್ಕವಿದೆ. ಹೊಸಪೇಟೆ, ಕೊಪ್ಪಳ, ಗದಗಗಳಲ್ಲಿ ವಾಸ್ತವ್ಯ ಮಾಡಬಹುದು.

LEAVE A REPLY

Please enter your comment!
Please enter your name here