ಆತನಿಗೆ 59 ವರ್ಷ.. ಪಾರ್ಶ್ವವಾಯು ಬಡಿದು ಸರಿಯಾಗಿ ನಡೆಯುಲೂ ಆಗದ ಸ್ಥಿತಿ. ಇದಕ್ಕೂ ಮುಂಚೆ ಅವನು ಮಾಡಿಕೊಂಡಿದ್ದು ತೆಂಗಿನ ಮರವೇರಿ ತೆಂಗಿನಕಾಯಿ ಕೀಳುವುದು. ಆದರೆ ಈತ ಕೇರಳದಲ್ಲಿ ಮಾತ್ರವಲ್ಲ, ದೇಶಾದ್ಯಂತ ಸುದ್ದಿ ಮಾಡುತ್ತಿದ್ದಾನೆ.

ಈತ ಮಾಡಿದ ಸಾಧನೆಯಾದರೂ ಏನು ಅಂದುಕೊಂಡಿರಾ? ಇಂತಹ ಪರಿಸ್ಥಿತಿಯಲ್ಲಿ ಜೀವನ ನಡೆಸುವುದೇ ಕಷ್ಟ. ಅದರಲ್ಲೂ ತನ್ನ ಕೆಲಸ ತಾನು ಮಾಡಿಕೊಂಡು ಬೇರೆಯವರನ್ನು ಅವಲಂಬಿಸದೇ ಬದುಕಿದರೆ ಸಾರ್ಥಕ ಅಂದುಕೊಳ್ಳುತ್ತಾರೆ. ಆದರೆ ಈತ ಮೂರು ವರ್ಷಗಳ ಕಾಲ ಬೆಟ್ಟ ಅಗೆದು ಮನೆಯಿಂದ ರಸ್ತೆಯವರೆಗೆ ನಡೆದುಹೋಗಲು ದಾರಿ ಮಾಡಿಕೊಟ್ಟು ಎಲ್ಲರ ಗಮನ ಸೆಳೆಯುತ್ತಿದ್ದಾನೆ.

ತಿರುವನಂತಪುರಂನ ಸಣ್ಣ ಹಳ್ಳಿಯೊಂದರ ನಿವಾಸಿಯಾಗಿರುವ ಶಶಿ ಜಿ. ಅವರಿಗೆ 9 ವರ್ಷ. 18 ವರ್ಷಗಳ ಹಿಂದೆ ತೆಂಗಿನ ಮರದಿಂದ ಬಿದ್ದು ಹಾಸಿಗೆ ಹಿಡಿದಿದ್ದರು. ಬಲಗೈ ಹಾಗೂ ಬಲಗಾಲು ಸ್ವಾಧೀನದಲ್ಲಿ ಇರಲಿಲ್ಲ. ಸತತ ಅಭ್ಯಾಸದಿಂದ ನಿಧಾನವಾಗಿ ನಡೆಯುವ ಸ್ಥಿತಿಗೆ ಬಂದಿದ್ದರು.

ಇಂತಹ ಸ್ಥಿತಿಯಲ್ಲಿ ಆತ ಪಂಚಾಯತ್‍ಗೆ ಅರ್ಜಿ ಸಲ್ಲಿಸಿ ಸ್ವಂತ ಕಾಲಮೇಲೆ ನಿಂತುಕೊಳ್ಳಲು ಆಟೋ ತೆಗೆದುಕೊಳ್ಳಲು ನೆರವು ನೀಡುವಂತೆ ಕೋರಿದ. ಆದರೆ ಮನಯಿಂದ ರಸ್ತೆಗೆ ಆಟೋ ಇಳಿಸಬೇಕೆಂದರೆ ರಸ್ತೆಯೇ ಇಲ್ಲ. ಈ ಪರಿಸ್ಥಿತಿಯಲ್ಲಿ ನಡೆದುಕೊಂಡು ಹೋಗುವಷ್ಟರದಲ್ಲಿ ಅರ್ಧದಿನವೇ ಕಳೆದುಹೋಗುತ್ತದೆ.

ಶಶಿ ಅವರ ಮನವಿ ನೋಡಿ ಪಂಚಾಯಿತಿ ಸದಸ್ಯರು ಛೇಡಿಸಿದರು. ಈ ಪರಿಸ್ಥಿತಿಯಲ್ಲಿ ಆಟೋ ಓಡಿಸುವುದೇ ಕಷ್ಟ. ಒಂದು ವೇಳೆ ಓಡಿಸುತ್ತೇನೆ ಅಂದರು ರಸ್ತೆಗೆ ಆಟೋ ಹೇಗೆ ಇಳಿಸುತ್ತಿಯಾ? ಮನೆಯಿಂದ ನಗರಕ್ಕೆ ಬರಬೇಕಾದರೆ ರಸ್ತೆಯೇ ಇಲ್ಲ. ಸದ್ಯದ ಮಟ್ಟಿಗೆ ರಸ್ತೆ ನಿರ್ಮಿಸುವುದೇ ಅಸಾಧ್ಯ ಎಂದು ನಕ್ಕರು.

ಪ್ರತಿದಿನ 6 ಗಂಟೆ ಶ್ರಮ

ಇದರಿಂದ ರಸ್ತೆ ನಿರ್ಮಿಸುವ ಪಣತೊಟ್ಟ ಶಶಿ ಅಂದಿನಿಂದಲೇ ಗುಡ್ಡ ಅಗೆಯಲು ಶುರು ಮಾಡಿದ್ದು ನಿಲ್ಲಿಸಲೇ ಇಲ್ಲ. ಪ್ರತಿದಿನ 6 ಗಂಟೆ ಇದೇ ಕೆಲಸಕ್ಕೆ ಮೀಸಲಿಟ್ಟರು. ಬೆಟ್ಟ ಹತ್ತುವಾಗ ಕಟ್ಟಿಕೊಳ್ಳುವ ಹಗ್ಗ ಕಟ್ಟಿಕೊಂಡು ರಸ್ತೆ ಅಗೆಯತೊಡಗಿದರು. ಇದರಿಂದ 200 ಮೀ. ಕಚ್ಚಾ ರಸ್ತೆ ಸಣ್ಣ ವಾಹನಗಳು ಚಲಿಸಬಹುದಾದ ದೊಡ್ಡ ರಸ್ತೆಯಾಗಿ ಬದಲಾಯಿತು.

ನನ್ನಿಂದ ಈ ಕೆಲಸ ಆಗಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ನಾನು ರಸ್ತೆ ಮಾಡಿಯೇ ಸಿದ್ಧ ಎಂದು ಪಣತೊಟ್ಟೆ. ಒಂದು ರೀತಿಯಲ್ಲಿ ಇದು ನನಗೆ ಫಿಸಿಯೋಥೆರಪಿ ಮಾದರಿಯಲ್ಲಿ ಚಿಕಿತ್ಸೆಯೂ ಲಭಿಸಿದಂತಾಯಿತು ಎಂದು ಶಶಿ ತಮ್ಮ ಶ್ರಮವನ್ನು ಹೇಳಿಕೊಂಡಿದ್ದಾರೆ.

ಪಂಚಾಯಿತಿ ನನಗೆ ವಾಹನ ಕೊಡಿಸದೇ ಇರಬಹುದು. ಆದರೆ ಜನರಿಗೆ ಭವಿಷ್ಯದಲ್ಲಾದರೂ ಸಹಾಯಕವಾಗಬಹುದು. ಇನ್ನೊಂದು ತಿಂಗಳು ಶ್ರಮಿಸಿದರೆ ರಸ್ತೆ ಪೂರ್ಣವಾಗುತ್ತದೆ. ಆಗಲಾದರೂ ವಾಹನ ಕೊಡುತ್ತಾರಾ ನೋಡಬೇಕು ಎಂದು ಶಶಿ ಹೇಳಿಕೊಂಡಿದ್ದಾರೆ.

ನಮಗೆ ಪ್ರತಿದಿನ ಈ ಬೆಟ್ಟ ಹತ್ತಿ ಹೋಗುವುದೇ ಕಷ್ಟವಾಗಿತ್ತು. ಶಶಿ ಅವರ ಪರಿಶ್ರಮದಿಂದ ನಮಗೆ ನಗರಕ್ಕೆ ಹೋಗಿಬರಲು ಸುಲಭವಾಗಿದೆ ಎಂದು 52 ವರ್ಷದ ನೆರೆಯ ಸುಧಾ ಅವರು ಪ್ರತಿಕ್ರಿಯಿಸಿದ್ದಾರೆ.

ಶಶಿ ಅವರ ಶ್ರಮ ಮತ್ತು ಹಠ ನೋಡಿ ಪತ್ನಿ ಕಣ್ಣೀರು ಹಾಕುತ್ತಿದ್ದರು. ಈ ರೀತಿ ಕೆಲಸ ಮಾಡಿ ಹೆಚ್ಚು ಕಡಿಮೆ ಆದರೆ ನಮ್ಮಿಂದ ನೋಡಿಕೊಳ್ಳಲೂ ಕಷ್ಟ. ಏಕೆಂದರೆ ಅಷ್ಟು ಹಣ ನಮ್ಮಲ್ಲಿಲ್ಲ. ಸಾಕಷ್ಟು ಸಾಲ ಬೇರೆ ಇದೆ. ಎಲ್ಲರೂ ರಸ್ತೆ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಮ್ಮ ಪರಿಸ್ಥಿತಿ ಸುಧಾರಿಸುವುದೇ ಎಂದು ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here